ಪ್ಲೇಗು

 ಪಾಸ್ಚುರೆಲ್ಲ ಪೆಸ್ಟಿಸ್ ಎಂಬ ಜೀವಾಣುವಿನಿಂದ ಬರುವ ಮಾರಕ ರೋಗ. ಇಂದು ಇದು ಅಪರೂಪವೆನಿಸಿದ್ದರೂ ಅತಿ ಪ್ರಾಚೀನ ಕಾಲದಿಂದಲೂ ಮಾನವಕುಲಕ್ಕೆ ಮಹಾಮಾರಿಯಾಗಿ ಲಕ್ಷಾವಧಿ ಜನರ ಸಾವಿಗೆ ಕಾರಣವಾಗಿದೆ. ತುಂಬ ತೀವ್ರತೆರನಾಗಿ ಗೋಚರಿಸುವ ಕೂರಾದ ಈ ರೋಗದ ಲಕ್ಷಣಗಳು ಜ್ವರ, ಫುಪ್ಫುಸ ಉರಿತ, ಇತ್ಯಾದಿ. ಪಾಸ್ಚುರೆಲ್ಲ ಪೆಸ್ಟಿಸ್ ಜೀವಾಣುವಿಗೆ ಹೊರಕವಚ ಉಂಟು. ಇದಕ್ಕೆ ಚಲನ ಸಾಮಥ್ರ್ಯವಿಲ್ಲ. ಇದು ಗ್ರಾಮ್ ವರ್ಣಲೇಪನ ಪಡೆಯದು. ಗೋಳಾಕಾರದ ಈ ಜೀವಿಯಲ್ಲಿ ಉಭಯ ಧ್ರುವಗಳತ್ತಲೂ ವರ್ಣ ಪಡೆಯಬಹುದಾದ ಚುಕ್ಕೆಗಳುಂಟು. ಪ್ರಯೋಗಶಾಲೆಯ ಸಾಮಾನ್ಯ ಕೃಷಿಕೆಯಲ್ಲಿ ಈ ಜೀವಾಣು ಸುಲಭವಾಗಿ ಬೆಳೆಯಬಲ್ಲದು. ಇದರಲ್ಲಿ ಎರಡು ರೀತಿಯ ರೋಧಜನಕಗಳುಂಟು.: ಒಂದು ಉಷ್ಣಕ್ಕೆ ಮಣಿಯುವ ಕವಚ ರೋಧಜನಕ, ಮತ್ತೊಂದು ಉಷ್ಣಕ್ಕೆ ಮಣಿಯದ ಕಾಯ (ದೈಹಿಕ) ರೋಧಜನಕ.

ಈ ರೋಗಾಣುವಿನ ಮೂಲ ಅತಿಥೇಯ ಜೀವಿ ವನ್ಯಪರಿಸರದಲ್ಲಿ ವಾಸಿಸುವ ಮೂಷಕ, ಗರ್ಬಿಲ್ ಜಾತಿಯದು. ಇದು ಗೃಹ ಪರಿಸರದಲ್ಲಿ ಕಂಡುಬರದು. ಭಾರತದಲ್ಲಿ ರೋಗಾಣುವಿನ ಆಕರವಾಗಿರುವುದು. ಟೆಟೆರಾ ಇಂಡಿಕಾ ಎಂಬ ವನ್ಯಮೂಷಕ, ಪ್ಲೇಗು ಮುಖ್ಯವಾಗಿ ಪ್ರಾಣಿಸಂಬಂಧ ರೋಗ. ಇದು ಕಾಡು ಪ್ಲೇಗಾಗಿ ಮಾನವಕುಲ ಮತ್ತು ಅದರ ಕಾರ್ಯ ಚಟುವಟಿಕೆಗಳಿಗೆ ಯಾವ ಸಂಬಂಧವೂ ಇಲ್ಲದಂತೆ ವನವಾಸಿ ಮೂಷಕಗಳಲ್ಲಿ ಉಂಟಾಗುತ್ತದೆ. ಈ ರೋಗಕ್ಕೆ ಮಾನವ ಮತ್ತು ಅವನ ಪರಿಸರದಲ್ಲಿ ವಾಸಿಸುವ ಗೃಹ ಮೂಷಕಗಳು ಆಕಸ್ಮಿಕವಾಗಿ ಬಲಿ ಆಗಬಲ್ಲವು. ಆಗ ಇದು ನಾಡ ಪ್ಲೇಗಾಗಿ ಮಾನವ ಸಾಮೀಪ್ಯದಲ್ಲಿ ವಾಸಿಸುವ ಮೂಷಕಗಳಲ್ಲಿ ಮತ್ತು ಸ್ವತಃ ಮಾನವನಲ್ಲಿ ರೋಗ ಗೋಚರಿಸುತ್ತದೆ. ಇದು ವಿಸ್ತøತವಾಗಿ ಹರಡಿ ಪಿಡುಗು ರೂಪದಲ್ಲಿ ಪ್ರಕಟಗೊಳ್ಳುವುದೂ ಉಂಟು. ಈ ರೋಗದ ಹರಡಿಕೆಯನ್ನು ಪರಿಶೀಲಿಸಿದಲ್ಲಿ, ಮನೆಯ ಸುತ್ತಮುತ್ತಣ ಇಲಿಗಳೂ ಮಾನವರೂ ಒಂದೇ ತೆರನಾಗಿ ಪ್ಲೇಗಿಗೆ ಒಳಪಡುವುದು ತೋರಬರುತ್ತದೆ. ವನ್ಯ ಮೂಷಕಗಳಲ್ಲಿ ಮಾತ್ರ ರೋಗದ ಸೋಂಕು ಜೀವಂತವಾಗಿ ಉಳಿದಿರುತ್ತದೆ.

ಪ್ಲೇಗ್ ಮತ್ತು ಇಲಿ ಸಂಬಂಧದ ಬಗ್ಗೆ ಪ್ರಾಚೀನ ಕಾಲದಿಂದಲೂ ಉಲ್ಲೇಖಗಳುಂಟು. ಕ್ರಿ.ಶ. ಎರಡನೆಯ ಶತಮಾನದಲ್ಲಿ ರಚಿತವಾದ ಭಗವತ್ ಪುರಾಣದಲ್ಲಿ ಮನೆಯ ಸುತ್ತ ಸತ್ತ ಇಲಿಗಳು ಗೋಚರವಾದ ಕೂಡಲೇ ಗೃಹತ್ಯಾಗ ಮಾಡಬೇಕೆಂಬ ಸಲಹೆಯಿದೆ. ಮಾಳಿಗೆಯ ಮೇಲಿಂದ ಇಲಿಗಳು ಸತ್ತು ಬೀಳುವುದು, ಅವಕ್ಕೆ ಪ್ಲೇಗುರೋಗ ತಗಲಿರುವುದರ ಸೂಚನೆ. ಇದು ಮಾನವನಿಗೆ ಪೂರ್ವಭಾವಿ ಎಚ್ಚರಿಕೆ ಎಂದು ತಿಳಿಯಲಾಗಿತ್ತು. 1894ರಲ್ಲಿ ಉಂಟಾದ ಹಾಂಗ್‍ಕಾಂಗ್ ಪ್ಲೇಗಿನ ಪಿಡುಗಿನಲ್ಲಿ ಕಿಟಸಾಟೋ ಮತ್ತು ಯರ್ಸಿನ್ ಎಂಬವರು ಈ ರೋಗದ ಜೀವಾಣುಗಳನ್ನು ಪತ್ತೆಹಚ್ಚಿದ್ದರೂ 1905-06ರ ಸುಮಾರಿನಲ್ಲಿ ಇಲಿಗಳು ಮತ್ತು ಮನುಷ್ಯದಲ್ಲಿ ಉಂಟಾಗುವ ಈ ರೋಗ ಪರಸ್ಪರ ಸಂಬಂಧ ಪಡೆದಿರುವುದನ್ನು ಖಚಿತಪಡಿಸಲಾಯಿತು. ಕ್ರಿ.ಶ. ಆರನೆಯ ಶತಮಾನದಲ್ಲಿ ಉತ್ತರ ಆಫ್ರಿಕ, ಈಜಿಪ್ಟ್ ಮತ್ತು ರೋಮನ್ ಸಾಮ್ರಾಜ್ಯದಲ್ಲಿ ಪ್ಲೇಗ್ ರೋಗ ಉಂಟಾಗಿದ್ದುದರ ಬಗ್ಗೆ ದಾಖಲೆ ಉಂಟು. ಅನಂತರ 14ನೆಯ ಶತಮಾನದಲ್ಲಿ ಈ ರೋಗ ಪಿಡುಗಾಗಿ ಇಡೀ ಯೂರೊಪ್‍ಖಂಡದಲ್ಲಿ ತನ್ನ ದುಷ್ಟಪ್ರಭಾವವನ್ನು ಬೀರಿ ಅಲ್ಲಿಯ ಜನಸಂಖ್ಯೆಯ ಮುಕ್ಕಾಲುಭಾಗ ನರಳಿ ಮರಣ ಹೊಂದುವುದಕ್ಕೆ ಕಾರಣವಾಯಿತು. ಆಗಲೇ ಈ ರೋಗಕ್ಕೆ ಕರಾಳ ಸಾವು ಎಂಬ ಅನ್ವರ್ಥನಾಮ ಲಭಿಸಿತು. ಅನಂತರದ ಶತಮಾನಗಳಲ್ಲಿ ತೀರ ಇತ್ತೀಚಿನತನಕವೂ ಇದು ಪಿಡುಗಾಗಿ ಪದೇ ಪದೇ ಗೋಚರಿಸಿದೆ.

ಭಾರತದಲ್ಲಿ ಈ ರೋಗ 1612ರಲ್ಲಿ ಪಿಡುಗಾಗಿ ಗೋಚರಿಸಿದ್ದಕ್ಕೆ ದಾಖಲೆ ಉಂಟು. ಅನಂತರ 1815ರಲ್ಲಿ ಕಚ್, 1823ರಲ್ಲಿ ಕುಮಾವ್ ಮತ್ತು 1836ರಲ್ಲಿ ರಜಪುಟಾಣದಲ್ಲಿ ಪ್ಲೇಗ್ ತಲೆದೋರಿದೆ. 1871ರಲ್ಲಿ ನೈಋತ್ಯ ಚೀನಾದ ಭಾಗದಲ್ಲಿ ಗೋಚರಿಸಿದ ಪ್ಲೇಗ್ ವ್ಯಾಪಾರೀ ಮಾರ್ಗಗಳ ಮೂಲಕ ಸಾಗಿ ಬಂದು 1896ರಲ್ಲಿ ಮುಂಬಯಿಯಲ್ಲಿಯೂ 1898ರಲ್ಲಿ ಕಲ್ಕತ್ತೆಯಲ್ಲಿಯೂ ಗೋಚರಿಸಿತು. ಅನಂತರ ಇದು ದೇಶದ ಅನೇಕ ಭಾಗಗಳಲ್ಲಿ ವಿಸ್ತøತವಾಗಿ ಕಾಣಿಸಿಕೊಂಡು 1898-1908ರ ಅವಧಿಯಲ್ಲಿ ಸುಮಾರು ಐದೂವರೆ ಲಕ್ಷ ಜನ ಈ ರೋಗದಿಂದ ಮೃತರಾದರು. 1908-18ರ ದಶಕದಲ್ಲಿ ಸುಮಾರು ನಾಲ್ಕೂಕಾಲು ಲಕ್ಷ ಜನ ಗತಿಸಿದರು. ಅಲ್ಲಿಂದ ಮುಂದಿನ ಮೂರು ದಶಕಗಳಲ್ಲಿ ಪ್ಲೇಗಿನಿಂದ ಸತ್ತವರ ಸಂಖ್ಯೆ ಸುಮಾರು 1.7 ಲಕ್ಷ, 42.300, 21,800. ತರುವಾಯದ ದಶಕಗಳಲ್ಲಿ ಸಾವುಗಳ ಸಂಖ್ಯೆ ಪರಿಣಾಮಕಾರಿಯಾಗಿ ಕಡಿಮೆಯಾಗಿದ್ದು 1968ರಿಂದ ಈಚೆಗೆ ಪ್ಲೇಗಿನಿಂದ ನರಳಿ ಸತ್ತ ಬಗೆಗೆ ಯಾವ ವರದಿಯೂ ಬಂದಿಲ್ಲ. ದಕ್ಷಿಣ ಭಾರತದಲ್ಲಿ ಕರ್ನಾಟಕದ ಕೋಲಾರ, ಅದರ ನೆರೆಹೊರೆ ಜಿಲ್ಲೆಗಳಾದ ಆಂಧ್ರದ ಚಿತ್ತೂರು ಮತ್ತು ತಮಿಳುನಾಡಿನ ಸೇಲಮಿನಲ್ಲಿ ಪರಿಮಿತವಾಗಿ ಪ್ಲೇಗುರೋಗದ ಸೋಂಕು ಉಳಿದಿರುವ ಬಗ್ಗೆ ದಾಖಲೆ ಉಂಟು. ಈ ರೋಗ ಮಾನವನ ಆವರಣದ ಹೊರಗೆ ನೈಸರ್ಗಿಕ ಮೂಲಗಳನ್ನು ಹೊಂದಿದ್ದು ಆ ಮೂಲಗಳನ್ನು ಸಂಪೂರ್ಣವಾಗಿ ನಿರ್ನಾಮ ಮಾಡಲು ಸಾಧ್ಯವಿಲ್ಲದಿರುವುದರಿಂದ ಪ್ಲೇಗು ಮನುಷ್ಯನಲ್ಲಿ ಗೋಚರಿಸುವ ಸಾಧ್ಯತೆಯನ್ನು ತಪ್ಪಿಸುವಂತಿಲ್ಲ. ವನ್ಯಪ್ಲೇಗಿಗೆ ಮಧ್ಯ ಏಷ್ಯ, ಮಧ್ಯ ಪೂರ್ವ ಏಷ್ಯ, ಮಧ್ಯ ಮತ್ತು ದಕ್ಷಿಣ ಆಫ್ರಿಕ, ದಕ್ಷಿಣ ಅಮೆರಿಕ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳ ಪಶ್ಚಿಮಭಾಗ ಇವು ಸ್ಥಿರ ನೆಲೆಗಳೆನಿಸಿವೆ. ಈ ದಶಮಾನಗಳಲ್ಲಿ ಪ್ಲೇಗು ಮನುಷ್ಯನಲ್ಲಿ ಗೋಚರಿಸದಿದ್ದರೂ ಅದು ಪ್ರಪಂಚದಿಂದ ಪೂರ್ಣವಾಗಿ ಮಾಯವಾಗಿದೆಯೆಂದು ಅರ್ಥವಲ್ಲ. 1994ರಲ್ಲಿ ಪ್ಲೇಗು ಗುಜರಾತಿನ ಸೂರತ್ ನಗರದಲ್ಲಿ ಗೋಚರಿಸಿದ್ದಿತು. ಇದರ ಬೆಳೆವಣಿಗೆಯನ್ನು ಅಭ್ಯಸಿಸಿದಲ್ಲಿ ಈ ರೋಗ ಅನೇಕ ದಶಕಗಳ ಕಾಲ ಮೂಷಿಕ ವರ್ಗದಲ್ಲಿ (ಬಹುಶಃ ವನ್ಯ) ಗುಪ್ತವಾಗಿ ಉಳಿದಿರುವುದು ಗೋಚರಿಸುತ್ತದೆ. ಬಹುದಿನಗಳ ಕಾಲ ಅಡಗಿ ಕುಳಿತ ರೋಗ ಒಮ್ಮೆಲೇ ಪ್ರಕಟ ಗೊಳ್ಳಬಹುದಾಗಿದೆ. ಬಹುಶಃ ನೆಲದಲ್ಲಿ ಹುದುಗಿ ಕುಳಿತ ಪ್ಲೇಗ್ ಜೀವಾಣುಗಳು ಇಲಿಗಳು, ಬಿಲಕೆದರುವಾಗ ಅವುಗಳೊಳಗೆ ಸೇರಬಹುದು ಮತ್ತು ಸಂಖ್ಯಾಭಿವೃದ್ಧಿ ಹೊಂದಬಹುದು. ಹಾಗೆಯೇ ಪ್ಲೇಗ್ ಜೀವಾಣುಗಳನ್ನು ಹೊಂದಿದ ವನ್ಯಮೂಷಕಗಳ ಸಂಪರ್ಕ ಪಡೆದ ನಾಡು ಇಲಿಗಳು ತಮ್ಮಲ್ಲಿ ಪ್ರತಿರೋಧಕ ಶಕ್ತಿಯಿಲ್ಲದಿರುವುದರಿಂದಲೊ ಏನೊ ರೋಗದ ಸೋಂಕನ್ನು ಪಡೆಯಬಹುದು. ಈ ಶತಮಾನವ ಆದಿಭಾಗದಲ್ಲಿ ಮಾನವಕುಲಕ್ಕೆ ಮಾರಕವಾಗಿ ಪರಿಣಮಿಸಿದ್ದ ಈ ರೋಗಮಲೇರಿಯ ನಿಯಂತ್ರಣಕ್ಕಾಗಿ ಡಿಡಿಟಿಯನ್ನು ವಿಸ್ತøತವಾಗಿ ದೇಶದಲ್ಲಿ ಬಳಸಲಾರಂಭಿಸಿದ ಬಳಿಕ ಕಡಿಮೆಯಾಗಿರುವುದು ಗಮನಿಸತಕ್ಕ ಸಂಗತಿಯಾಗಿದೆ. ಸೊಳ್ಳೆಗಳನ್ನು ಡಿಡಿಟಿ ನಿರ್ಮೂಲಿಸಿದಂತೆ ಚಿಗಟಗಳನ್ನೂ ನಿರ್ಮೂಲಿಸಿ ಈ ಪರಿಣಾಮವನ್ನು ಉಂಟುಮಾಡಿರಬಹುದು. ಮನೆಯ ಪರಿಸರದಲ್ಲಿ ಇಲಿಗಳು ಸೇರದಂತೆ ಗೃಹನಿರ್ಮಾಣ, ಸೋಂಕು ರೋಗಗಳ ನಿಯಂತ್ರಣ, ನೈರ್ಮಲ್ಯ, ನಾಗರಿಕ ಜೀವನ ಸಹ ಈ ರೋಗದ ಪ್ರಖರತೆಯನ್ನು ಅಡಗಿಸುವಲ್ಲಿ ಸಹಾಯಕರವಾಗಿರಬಹುದು.

ಪ್ಲೇಗ್ ಜೀವಾಣುಗಳು ನಿಸರ್ಗದಲ್ಲಿ ರಸಾಯನವಸ್ತುಗಳನ್ನು ಮತ್ತು ಉಷ್ಣವನ್ನು ಎದುರಿಸಿ ಬದುಕಲಾರವು. ಆದರೂ ಒಣಗಿದ ಕಫದಲ್ಲಿ ಅವು ಮೂರು ತಿಂಗಳು ಕಾಲ ಬದುಕಿರಬಲ್ಲವು. ತಂಪು ಹವಾಗುಣ ಅವುಗಳ ನಾಶವನ್ನು ತಡೆಯುವುದರಿಂದ ತೇವಭರಿತ ನೆಲದಲ್ಲಿ ಅವು ಬಹುಕಾಲ ಬದುಕಿ ಉಳಿಯುತ್ತವೆ. ಈ ಜೀವಾಣುಗಳು ಮನುಷ್ಯನಲ್ಲಿ ಸಂಖ್ಯಾಭಿವೃದ್ಧಿ ಹೊಂದುವ ಸಾಮಥ್ರ್ಯ ಮತ್ತು ಅಲ್ಲಿ ರೋಗ ಉಂಟುಮಾಡಿ ಸಾವನ್ನು ಕೊಂಡು ತರುವ ಪ್ರಬಲ ಸಾಮಥ್ರ್ಯ ಕಳೆದುಕೊಳ್ಳದೆ ಅನೂಚಾನವಾಗಿ ಉಳಿಸಿಕೊಂಡು ಬಂದಿವೆ. ಆದರೂ ರೋಗ ಪಿಡುಗು ರೂಪ ಧರಿಸಿದ್ದಾಗ ಕೆಲವರು ತೀವ್ರತೆರನಾದ ರೋಗವನ್ನು ತೋರ್ಪಡಿಸದೆ. ರೋಗದಿಂದ ಚೇತರಿಸಿಕೊಳ್ಳಬಲ್ಲ ಶಕ್ತಿಯನ್ನು ಹೊಂದಿದ್ದಾರೆ. ಬಹುಶಃ ಅವರಲ್ಲಿ ರೋಗನಿರೋಧಕ ಸಾಮಥ್ರ್ಯ ಪ್ರಬಲವಾಗಿರುವುದು ಕಾರಣವೆಂದು ತಿಳಿಯಲಾಗಿದೆ.

ಜಿನೋಪ್ಯೆಲ್ಲಾ ಚಿಯೋಪಿಸ್ ಚಿಕ್ಕಾಡು ರೋಗವಾಹಕವಾಗಿದ್ದು. ಅದು ರೋಗಿಷ್ಟ, ಪ್ರಾಣಿಯರಸವನ್ನು ಹೀರಿದಾಗ ರೋಗಾಣುಗಳು ಒಳಸೇರಿ ಚಿಗಟದ ಅನ್ನನಾಳದಲ್ಲಿ ವಿಪುಲವಾಗಿ ವೃದ್ಧಿಯನ್ನು ಹೊಂದುತ್ತವೆ. ಇಂಥ ಚಿಗಟ ಮತ್ತೊಂದು ಪ್ರಾಣಿಯನ್ನು ಕಚ್ಚಿದಾಗ ಸೋಂಕು ಅದರ ಒಳಸೇರುತ್ತದೆ. ಚಿಕ್ಕಾಡುಗಳು ಸೋಂಕು ಸೇರಿದ ರಕ್ತವನ್ನು ಹೀರಿದಾಗ ರೋಗಾಣುಗಳು ಪಚನಾಂಗ ಮತ್ತು ಜಠರಕೋಶದಲ್ಲಿ ಸೇರಿ ಅವುಗಳ ಸಂಖ್ಯೆ ವೃದ್ಧಿಯಾಗಿ ಲೋಳೆಯಂಥ ಗುಂಪು ಅನ್ನನಾಳವನ್ನು ಸಂಪೂರ್ಣವಾಗಿ ಮುಚ್ಚುತ್ತದೆ. ಇದರಿಂದಾಗಿ ಚಿಕ್ಕಾಡು ಹೀರಿದ ರಕ್ತ ಒಳಸೇರದಂಥ ಸನ್ನಿವೇಶವನ್ನು ಎದುರಿಸಬೇಕಾಗುತ್ತದೆ. ಜೀವಾಣುಗಳ ಗುಂಪು ಅನ್ನನಾಳವನ್ನು ಹೀರುತ್ತದೆ. ಹೀರಿದ ರಕ್ತ ಒಳಹೋಗಲು ಅನ್ನನಾಳ ಸಂಮರ್ದನೆಗೊಳ್ಳುತ್ತದೆ. ಆಗ ರೋಗಾಣು ಗುಂಪು ಸ್ಥಳಪಲ್ಲಟಗೊಂಡು ಅವನ್ನು ಕಚ್ಚಿದ ಸ್ಥಳದೊಳಕ್ಕೆ ಕಕ್ಕುತ್ತದೆ. ಇನ್ನು ಕೆಲವು ಚಿಕ್ಕಾಡುಗಳಲ್ಲಿ ಹೀರಿದ ರಕ್ತ ಒಳಸೇರಲು ಯಾವುದೇ ತೆರನಾದ ತೀವ್ರ ಅಡ್ಡಿಯನ್ನು ಎದುರಿಸಬೇಕಿಲ್ಲ. ಅವುಗಳ ಹಾದಿಯಲ್ಲಿ ಸಂಪೂರ್ಣವಾಗಿ ತಡೆಯಿದ್ದರೂ ಒಮ್ಮೆ ಒಳಸೇರಿದ ಚಿಕ್ಕಾಡುಗಳು ಮತ್ತೆ ಹೊರಬಂದು ಕಚ್ಚಿದ ಸ್ಥಳವನ್ನು ತಲುಪುತ್ತವೆ. ಒಮ್ಮೆ ಕಚ್ಚಿದಾಗ ಸೋಂಕು ರಕ್ತ ಒಳಸೇರಿ. ಅಲ್ಲಿ ಜೀವಾಣುಗಳು ವೃದ್ಧಿಗೊಂಡು ಮತ್ತೆ ಕಚ್ಚಿದಾಗ ಹೊಸ ಅತಿಥೇಯ ಜೀವಿಯನ್ನು ಸೇರುವ ಜೈವಿಕ ಹರಡಿಕೆ ಪ್ಲೇಗು ರೋಗದಲ್ಲಿ ವಿಶಿಷ್ಟವಾದುದಾಗಿದೆ.

ಚಿಕ್ಕಾಡುಗಳ ಸಂಖ್ಯೆ ಬೇರೆ ಬೇರೆ ಹವಾಗುಣಗಳಲ್ಲಿ ವ್ಯತ್ಯಾಸವನ್ನು ತೋರ್ಪಡಿಸುತ್ತದೆ. ಇಲಿಯಿಂದ ಇಲಿಗೆ ರೋಗವನ್ನು ಕೊಂಡೊಯ್ಯುವ ಚಿಕ್ಕಾಡುಗಳು ಅಂತ್ಯದಲ್ಲಿ ಅಂದರೆ ಈ ಇಲಿಗಳಿಗೆ ಪ್ಲೇಗು ತಗಲಿ ರೋಗಿಷ್ಠ ಇಲಿಗಳು ಸತ್ತಬಳಿಕ ಸತ್ತ ಇಲಿಗಳ ದೇಹವನ್ನು ತ್ಯಜಿಸಿ ಹೊಸ ಪೋಷಕ ಜೀವಿಯನ್ನು ಅರಸಬೇಕಾಗುತ್ತದೆ. ಅವು ಮನುಷ್ಯನನ್ನು ಕಚ್ಚಿ ಅವನಲ್ಲಿ ರೋಗವನ್ನು ಉಂಟುಮಾಡುತ್ತವೆ. ಇಂಥ ರೋಗದ ಹರಡಿಕೆಯಲ್ಲಿ ಸೋಂಕು ರಕ್ತ ಹೀರಿದಾಗ ಅನ್ನನಾಳದಲ್ಲಿ ಅಸಂಪೂರ್ಣ ತಡೆಯುಂಟಾಗುವ ಚಿಕ್ಕಾಡುಗಳ ಪಾತ್ರ ಬಲುಮುಖ್ಯವಾದುದು. ಸತ್ತ ಇಲಿಯನ್ನು ತ್ಯಜಿದ ಮೇಲೂ ಅವು ಮೂರು ವಾರ ಪರ್ಯಂತ ಬದುಕಿರಬಲ್ಲವು. ಸಂಪೂರ್ಣ ತಡೆಯನ್ನು ಹೊಂದಿದ ಚಿಕ್ಕಾಡುಗಳು ರೋಗವಾಹಕಗಳಾಗಿ ಕಾರ್ಯ ನಡೆಸಿದರೂ ಅವು ಎರಡು ಮೂರು ದಿವಸಗಳ ಕಾಲ ಬದುಕಿರಬಲ್ಲವು. ಅನ್ನನಾಳದಲ್ಲಿಯ ಸಂಪೂರ್ಣ ತಡೆಯಿಂದಾಗಿ ಅವು ಬೇಗ ನಿರ್ನಾಮ ಹೊಂದುತ್ತವೆ. ಚಿಕ್ಕಾಡುಗಳು ಮನುಷ್ಯನ ಚರ್ಮವನ್ನು ಕಚ್ಚಿ ರೋಗವನ್ನು ಒಳಸೇರಿಸುತ್ತವೆ. ಯಾವ ರಕ್ಷಣೆಯೂ ಇಲ್ಲದ ಪಾದ ಮತ್ತು ಕಾಲುಗಳನ್ನು ಚಿಕ್ಕಾಡುಗಳು ಕಚ್ಚುವುದು ಸಾಮಾನ್ಯ. ಸತ್ತ ಇಲಿಗಳನ್ನು ತೆಗೆದು ಹಾಕುವ ಜಲಗಾರರಲ್ಲಿ ಕೈ ಮುಂದೋಳಿನ ಪ್ರದೇಶವನ್ನು ಚಿಕ್ಕಾಡುಗಳು ಕಚ್ಚಬಹುದು. ಒಳಸೇರಿದ ರೋಗಾಣುಗಳು ದುಗ್ಧರಸ ನಾಳದ ಮೂಲಕ ಸಾಗಿ ಬಂದು ದುಗ್ಧರಸ ಗ್ರಂಥಿಯಲ್ಲಿ ಶೋಧಿಸಿ ಹಿಡಿದಿಡಲ್ಲಡುತ್ತವೆ. ತತ್ಫಲವಾಗಿ ಪ್ಲೇಗಿನ ಗಡ್ಡೆ ತಲೆದೋರುತ್ತದೆ. ಗಡ್ಡೆ ಪ್ಲೇಗು ರೋಗಗ್ರಸ್ತನಿಂದ ಇನ್ನೊಬ್ಬನಿಗೆ ನೇರವಾಗಿ ಹರಡುವುದಿಲ್ಲ. ಸೋಂಕುಕಾರಕ ಜೀವಾಣುಗಳ ಸಂಖ್ಯೆ ರಕ್ತದಲ್ಲಿ ವಿಪುಲವಾಗಿಲ್ಲದಿರುವುದೇ ಇದರ ಕಾರಣ ಈ ವಿರಳತೆಯಿಂದಾಗಿ ಚಿಕ್ಕಾಡಿನ ಮೂಲಕ ವ್ಯಕ್ತಿಯಿಂದ ವ್ಯಕ್ತಿಗೆ ರೋಗ ಪ್ರಸರಣವಾಗುವ ಸಾಧ್ಯತೆ ಇಲ್ಲ.
ಪುಪ್ಫುಸ ಉರಿತ ಗಡ್ಡೆ ಪ್ಲೇಗಿನ ಅಡ್ಡ ಪರಿಣಾಮವಾಗಿ ಗೋಚರಿಸಬಹುದು. ಅಂಥ ಸನ್ನಿವೇಶದಲ್ಲಿ ವ್ಯಕ್ತಿ ಕೆಮ್ಮಿ ಹೊರತೆಗೆಯುವ ಕಫದಲ್ಲಿ ರೋಗಾಣುಗಳು ವಿಪುಲ ಸಂಖ್ಯೆಯಲ್ಲಿ ಗೋಚರಿಸುತ್ತವೆ. ಅನುಕೂಲಕರ ಪರಿಸರ ಮತ್ತು ಹವಾಗುಣವಿದ್ದಲ್ಲಿ ಅವು ರೋಗಿಯ ಸಂಪರ್ಕ ಹೊಂದಿದ ವ್ಯಕ್ತಿಯಲ್ಲಿ ಬಲುಬೇಗ ರೋಗೋತ್ಪಾದನೆಯನ್ನು ಮಾಡುತ್ತವೆ. ಕೆಮ್ಮಿದಾಗ ಹೊರಬರುವ ತುಂತುರಿನಲ್ಲಿ ರೋಗಾಣುಗಳು ವಿಪುಲ ಸಂಖ್ಯೆಯಲ್ಲಿದ್ದು ಸಮೀಪವರ್ತಿಗಳಲ್ಲಿ ರೋಗವನ್ನು ಉಂಟುಮಾಡಬಲ್ಲವು. ತಂಪು ವಾತಾವರಣ, ಗಾಳಿಯಾಡದ ಮನೆಗಳು ಜನದಟ್ಟಣೆಯ ವಸತಿ ಇವು ರೋಗದ ಹರಡಿಕೆಗೆ ಸಹಕಾರಿ. ವ್ಯಕ್ತಿಯಿಂದ ವ್ಯಕ್ತಿಗೆ ಹರಡಬಲ್ಲ ರೋಗದಿಂದಾಗಿ ಈ ರೀತಿಯ ಪ್ಲೇಗು ಭೀಕರವಾದ ಅಂಟು ಜಾಡ್ಯವೆಂದು ಪರಿಗಣಿಸಲ್ಪಟ್ಟಿದೆ. ಪ್ರಯೋಗಶಾಲೆಯಲ್ಲಿ ಈ ಜೀವಂತ ರೋಗಾಣುಗಳೊಡನೆ ಪ್ರಯೋಗನಿರತರಾಗಿರುವ ವ್ಯಕ್ತಿಗಳು ಆಕಸ್ಮಿಕವಾಗಿ ಪ್ಲೇಗ್ ರೋಗಕ್ಕೆ ತುತ್ತಾಗಬಲ್ಲದು. ಈ ರೋಗ ಬರಲು ಯಾವುದೇ ವಯಸ್ಸು ಲಿಂಗಭೇದವಿಲ್ಲ. ಎಲ್ಲರೂ ಇದಕ್ಕೆ ಸುಲಭವಾಗಿ ಬಲಿಯಾಗಬಲ್ಲರು. ಮನುಷ್ಯನಲ್ಲಿ ಯಾವುದೇ ನೈಸರ್ಗಿಕ ರೋಧಕತೆಯೂ ಇಲ್ಲ. ಒಮ್ಮೆ ರೋಗ ಬಂದು ಅದರಿಂದ ಚೇತರಿಸಿ ಕೊಂಡವರಲ್ಲಿ ಅದು ರೋಗದ ವಿರುದ್ಧ ಶಾಶ್ವತವಾದ ರೋಧಕತೆಯನ್ನು ಕೊಡುತ್ತದೆ. ರೋಗ ಪ್ರಾರಂಭವಾದ ಐದು ದಿವಸಗಳಲ್ಲಿಯೇ ದೇಹದಲ್ಲಿ ರೋಧಕಗಳು ಉತ್ಪನ್ನವಾಗುತ್ತವೆ.

ಚಿಗಟದ ಕಡಿತದಿಂದ ಚರ್ಮದ ಮೂಲಕ ಒಳಸೇರಿದ ಪ್ಲೇಗ್ ರೋಗಾಣು ದುಗ್ಧರಸ ನಾಳದ ಮೂಲಕ ರಕ್ತ ಪ್ರವಾಹವನ್ನು ಸೇರಿ ದೇಹಾದ್ಯಂತ ಪಸರಿಸುತ್ತದೆ. ಅದು ದೇಹದಲ್ಲಿ 3ರಿಂದ 6 ದಿವಸಗಳ ಕಾಲ ಹುದುಗಿ ಕುಳಿತು ಬೆಳೆಯುತ್ತದೆ. ಕೆಲವು ಬಾರಿ ಆ ಕಾಲ 36 ಗಂಟೆಗಳಷ್ಟು ಕಡಿಮೆ ಅವಧಿಯದಾಗಿಯೂ ಇಲ್ಲವೆ 10 ದಿವಸಗಳಷ್ಟು ದೀರ್ಘಾವಧಿಯದಾಗಿಯೂ ಇರಬಹುದು. ರೋಗಾಣುಗಳು ವಿಫುಲ ಸಂಖ್ಯೆಯಲ್ಲಿ ದುಗ್ಧರಸ ಗ್ರಂಥಿ, ಈಲಿ, ತೊರಳೆ, ರಕ್ತ, ಮೂಳೆಯ ತಿರುಳಿನಲ್ಲಿ ಗೋಚರಿಸುತ್ತವೆ. ರೋಗಾಣುಗಳು ದೇಹದ ಊತಕಗಳ ಮೇಲೆ ದುಷ್ಪರಿಣಾಮವನ್ನು ಬೀರಿ ಕೆಡುಕನ್ನು ಉಂಟುಮಾಡುತ್ತವೆ. ರೋಗದ ವ್ರಣಗಳು ಮುಖ್ಯವಾಗಿ ದುಗ್ಧರಸ ಮಂಡಲದಲ್ಲಿಯ ಗ್ರಂಥಿಗಳಲ್ಲಿ ತೋರಿಬರುತ್ತದೆ. ಉರಿತದ ಲಕ್ಷಣಗಳನ್ನು ತೋರುವ ದುಗ್ಧರಸ ಗ್ರಂಥಿಗಳು ಉಬ್ಬಿ ಕೀವುಗೊಳ್ಳುತ್ತವೆ. ಅವುಗಳ ಭಾಗ ಅಲ್ಲಲ್ಲಿ ಕೊಳೆತು ವಿಪುಲ ಸಂಖ್ಯೆಯಲ್ಲಿ ಜೀವಾಣುಗಳು ವೃದ್ಧಿಗೊಳ್ಳುತ್ತವೆ. ಫುಪ್ಫುಸಕ್ಕೆ ರೋಗಾಣುಗಳು ಕೊಂಡೊಯ್ಯಲ್ಪಟ್ಟು ಅಲ್ಲಿ ಉರಿತ ಉಂಟುಮಾಡಿ, ವಾಯುಕುಹರಗಳಲ್ಲಿ ರಕ್ತೋದ್ರೇಕದ ಒಸರಿಕೆಯನ್ನು ಉಂಟುಮಾಡುತ್ತದೆ. ರೋಗದ ಸಂಪರ್ಕ ಹೊಂದಿದ ವ್ಯಕ್ತಿಯಲ್ಲಿ ಅದು ಪ್ಲೇಗುಗಡ್ಡೆ, ಫುಪ್ಭುಸ ಉರಿತ ಮತ್ತು ರಕ್ತ ನಂಜು ಈ ಮೂರು ರೂಪಗಳಲ್ಲಿ ಪ್ರಕಟಗೊಳ್ಳಬಹುದು. ರೋಗ ಪಿಡುಗು ರೂಪ ತಳೆದಾಗ ಎಲ್ಲ ತೆರನಾದ ತೀವ್ರತೆಯಲ್ಲಿಯೂ ಪ್ರಕಟವಾಗಬಹುದು. ಅದು ತುಂಬ ಸಾಧಾರಣ ರೂಪದಿಂದ ಹಿಡಿದು ಜೀವಕ್ಕೆ ಮಾರಕವಾದ ರೀತಿಯಲ್ಲಿ ಗೋಚರಿಸಬಹುದು. ಬಹುಪಾಲು ಜನರಲ್ಲಿ ತೋರಿಬರುವ ರೋಗದ ರೂಪ ಸಾಮಾನ್ಯವಾಗಿ ಗಡ್ಡೆ ಪ್ಲೇಗು. ಗಡ್ಡೆ ಪ್ಲೇಗಿನಲ್ಲಿ ಜ್ವರ, ನಡುಕ, ತಲೆಸಿಡಿಯುವಂಥ ನೋವು, ಓಕರಿಕೆ, ವಾಂತಿ, ಸುಸ್ತು, ಆಸ್ಥಿರತೆ ಮತ್ತು ಬಡಬಡಿಕೆ ಮೊದಲು ತೋರಿಬರುವ ಲಕ್ಷಣಗಳು. ಕಣ್ಣು ಕೆಂಪಾಗುವುದು, ದೈಹಿಕ ಉಷ್ಣತೆ 40-410 ಅ ಯಷ್ಟು ಏರುತ್ತದೆ. ಚಿಗಟ ಕಡಿದ ಸ್ಥಳವನ್ನು ಗುರುತಿಸುವುದು ಅನೇಕ ಬಾರಿ ಕಷ್ಟಸಾಧ್ಯ. ಕೆಲವು ಬಾರಿ ಆ ಸ್ಥಳದಲ್ಲಿ ನೀರುಗುಳ್ಳೆ ಗೋಚರಿಸುತ್ತದೆ. ಅನಂತರ ಸ್ಥಳೀಯವಾಗಿ ದುಗ್ಧರಸ ಗ್ರಂಥಗಳು ಉಬ್ಬಿ ನೋಯತೊಡಗುತ್ತವೆ. ಅವು ತೊಡೆಸಂದುಗಳಲ್ಲಿಯೂ ಗೆಜ್ಜೆಯಲ್ಲಿಯೂ ಸಾಮಾನ್ಯ. ಚಿಕ್ಕಾಡು ಕಚ್ಚುವುದು ತೆರೆದ ಪಾದ ಮತ್ತು ಕಾಲುಗಳನ್ನಾದ್ದರಿಂದ ಈ ಪ್ರದೇಶಗಳಲ್ಲಿಯ ದುಗ್ಧರಸ ಗ್ರಂಥಿಗಳ ಉರಿತ ಸಹಜ. ಬಾವು ಒಂದೇ ಕಡೆ ಗೋಚರಿಸಿದರೂ ಕೆಲವು ಬಾರಿ ಎರಡು ಬದಿಗೂ ತೋರಿಬರಬಹುದು. ಇನ್ನು ಕೆಲವರಲ್ಲಿ ಕಂಕಳು ಮತ್ತು ಕತ್ತಿನಲ್ಲಿಯ ದುಗ್ಧರಸ ಗ್ರಂಥಿಗಳು ಉಬ್ಬಬಹುದು. ಈ ಪ್ರದೇಶಗಳಲ್ಲಿ ಅನೇಕ ಗ್ರಂಥಿಗಳು ಉಬ್ಬಿ ಒಗ್ಗೂಡುತ್ತವೆ. ಅವುಗಳ ಸುತ್ತ ಬಾವು ತಲೆದೋರುತ್ತದೆ. ಇದೇ ಪ್ಲೇಗು ಅಥವಾ ಜ್ವರದ ಗಡ್ಡೆ. ಗಡ್ಡೆ ತೋರಿದ ಮೇಲೆ ರೋಗವನ್ನು ಗುರುತಿಸುವುದು ಸುಲಭವಾಗುತ್ತದೆ. ರೋಗದ ಲಕ್ಷಣಗಳು ಪ್ರಾರಂಭವಾದ ಎರಡನೆಯ ದಿನದಲ್ಲಿ ಗಡ್ಡೆಗಳು ಕಾಣಿಸಿಕೊಳ್ಳುತ್ತವೆ. ಇವು ಕೆಲವು ಬಾರಿ ತಾವಾಗಿಯೇ ಕುಗ್ಗಿ ಹೋಗಬಹುದು, ಚಿಕಿತ್ಸೆಗೊಳಪಡದ ಅನೇಕರಲ್ಲಿ ಇವು ಕೀವುಗೊಂಡು ಒಂದೆರಡು ವಾರಗಳಲ್ಲಿ ಒಡೆದು ಕೀವು ಸುರಿಯುವಂತಾಗುತ್ತದೆ. ಜೀವಾಣುಗಳ ಒಳವಿಷದ ಪ್ರಭಾವದಿಂದಾಗಿ ರಕ್ತನಾಳಗಳು ಭಿನ್ನಗೊಂಡು ರಕ್ತೋದ್ರೇಕ ದೇಹಾದ್ಯಂತ ಉಂಟಾಗಬಹುದು. ರೋಗಾದ್ಯಂತ ಅನಿಯಮಿತ ಜ್ವರ ತೋರಿದರೂ ಗಡ್ಡೆ ಕಾಣಿಸಿದ ಮೇಲೆ ಜ್ವರ ನಿಧಾನವಾಗಿ ಕೆಳಕ್ಕಿಳಿಯುತ್ತದೆ. ಗಡ್ಡೆ ಅತಿ ಭಯಾನಕ. ಅನೇಕರಲ್ಲಿ ಬೆಳೆವಣಿಗೆ ಹೊಂದಿದ ಮೊದಲ ವಾರದಲ್ಲಿ ಸಾವು ಉಂಟಾಗುತ್ತದೆ. ರೋಗ ಪಿಡುಗು ರೂಪ ತಳೆದಾಗ ಕೆಲವರಲ್ಲಿ ಇದು ಸೌಮ್ಯಸ್ವರೂಪದಲ್ಲಿ ಕಾಣಿಸಿಕೊಳ್ಳುತ್ತದೆ.

ಇಲಿಗಳಲ್ಲಿ ರೋಗ ಬಂದಿರುವುದನ್ನು ಗುರುತಿಸಿ, ರೋಗವನ್ನು ಹಿಡಿತದಲ್ಲಿ ತರುವ ಕಾರ್ಯಕ್ಕೆ ಚಾಲನೆಯನ್ನು ನೀಡಬೇಕು. ಪ್ಲೇಗ್ ರೋಗ ವ್ಯಕ್ತಿಯೊಬ್ಬನಲ್ಲಿ ಗೋಚರಿಸಿದ ಕೂಡಲೇ ಅದನ್ನು ಸಾರ್ವಜನಿಕ ಆರೋಗ್ಯ ಅಧಿಕಾರಿಗಳಿಗೆ ವರದಿ ಮಾಡಿ, ರೋಗಿಯನ್ನು ಗೃಹಪರಿಸರದಿಂದ ಬೇರ್ಪಡಿಸಿ ಇರಿಸಿ ಶುಶ್ರೂಷೆಗೆ ಒಳಪಡಿಸಬೇಕು. ಅದರಲ್ಲೂ ಈ ರೀತಿಯಲ್ಲಿ ಬೇರೆಯಾಗಿರಿಸಿದ ಚಿಕಿತ್ಸೆಯನ್ನು ಪುಪ್ಫುಸ ಉರಿತ ತಲೆದೋರಿದಾಗ ಕಟ್ಟುನಿಟ್ಟಾಗಿ ಪಾಲಿಸಬೇಕು. ಚಿಕಿತ್ಸೆಯಲ್ಲಿ ಸ್ಟ್ರೆಪ್ಟೊಮೈಸಿನ್ ಇಲ್ಲವೆ ಜೆಂಟಾಮೈಸಿನ್ ಉಪಯುಕ್ತ. ಕೆಲವೊಮ್ಮೆ ಅವುಗಳ ಬದಲು ಟೆಟ್ರಾಸೈಕ್ಲಿನ್ ಇಲ್ಲವೆ ಕ್ಲೇರಾಂಫೆನಿಕಾಲ್ ಬಳಸಬಹುದು. ರೋಗಿಗೆ ವಿಶ್ರಾಂತಿ ಒದಗಿಸಿ ದ್ರವಾಹಾರ ನೀಡಬೇಕು. ಗಡ್ಡೆಗೆ ಕಾವು, ಪಿಂಗಾಣಿ ಮಣ್ಣಿನ ಬಸಿಕಟ್ಟು, ಬೆಲ್ಲಡೋನಾ, ಗ್ಲಿಸರಿನ್ ಲೇಪನ ಕೊಡಬೇಕು. ರೋಗಿಯ ವಸ್ತುಗಳು, ಉಡುಪು, ಹಾಸಿಗೆ, ಹೊದಿಕೆಗಳನ್ನು ಸೋಂಕುನಾಶಕ ದ್ರವದಿಂದ ಸಿಂಪಡಿಸುತ್ತಿರಬೇಕು, ಇಲ್ಲವೇ ಶುಚಿಗೊಳಿಸುತ್ತಿರಬೇಕು, ಇಲ್ಲವೇ ಸುಡಬೇಕು. ಆತ ವಿಸರ್ಜಿಸುವ ವಸ್ತುಗಳು, ಕೀವು ಒಸರಿಕೆ, ಕಫಗಳ ನಾಶ ಮಾಡುವುದು ಅತಿಮುಖ್ಯ. ರೋಗಿಗಳನ್ನು ಅವರಲ್ಲಿಯ ರೋಗದ ಸೋಂಕು ಕಳೆಯುವ ತನಕವೂ ಬೇರೆಯಾಗಿ ಇರಿಸಬೇಕು. ರೋಗಿಯ ಸಮೀಪವರ್ತಿಗಳನ್ನೂ ರೋಗಿಯ ಸಂಪರ್ಕ ಹೊಂದಿದ ವ್ಯಕ್ತಿಗಳನ್ನೂ ವೈದ್ಯಪರೀಕ್ಷೆಗೆ ಒಳಪಡಿಸಿ ಅವರಿಗೆ ಟೆಟ್ರಾಸೈಕ್ಲಿನ್ ಇಲ್ಲವೆ ಕೊಟ್ರೈಮಾಕ್ಸಜೋಲ್ ಔಷಧಿಯನ್ನು ರೋಗ ನಿರೋಧಕವಾಗಿ ಕೊಡಬೇಕು. ಆರು ದಿವಸ ಪರ್ಯಂತ ಅವರನ್ನು ಬೇರೆಯಾಗಿರಿಸಬೇಕು. ರೋಗಿಯ ಶುಶ್ರೂಷೆಯಲ್ಲಿ ನಿರತರಾದವರು ಮೊಗವಾಡಗಳನ್ನು ಮತ್ತು ಕೈಗವಸಣಿಕೆಗಳನ್ನು ಹಾಕಿಕೊಳ್ಳಬೇಕು.

ರೋಗ ಪಿಡುಗು ರೂಪ ತಳೆದಿದ್ದಲ್ಲಿ ರೋಗಾಣುಗಳ ಲಸಿಕೆ ಕೊಡುಗೆ ಕೆಲಕಾಲದ ತನಕ ವ್ಯಕ್ತಿಗೆ ರೋಗದ ವಿರುದ್ಧ ರಕ್ಷಣೆಯನ್ನು ನೀಡುತ್ತದೆ. ಮೊದಲು ಹಾಫ್‍ಕೀನ್ ಸಿದ್ಧಪಡಿಸಿ, ಅನಂತರ ಸೋಖಿ ಮಾರ್ಪಾಡುಗೊಳಿಸಿದ ವಿಧಾನದಿಂದ ಲಭಿಸಿದ ಲಸಿಕೆಯನ್ನು ಈ ಕಾರ್ಯಕ್ಕೆ ಬಳಸಲಾಗುತ್ತದೆ. ಫಾರ್ಮಲೀನಿನನಿಂದ ಕೊಂದ ಪ್ರಬಲ ಜೀವಾಣುಗಳು ರೋಧಜನಕಗಳಾಗಿ ಕಾರ್ಯ ಮಾಡುತ್ತದೆ. ತೀವ್ರ ತೆರನಾದ ರೋಗ ಉಂಟಾಗುವ ಸಾಧ್ಯತೆಯಿದ್ದಾಗ ವ್ಯಕ್ತಿಯಲ್ಲಿ ಪ್ಲೇಗಿನ ಬೆಳೆವಣಿಗೆಯನ್ನು ಅದು ತಡೆಗಟ್ಟುತ್ತದೆ. ಅದರ ವಿಸ್ತøತ ಬಳಕೆಯಿಂದ ಪ್ಲೇಗಿನ ಸಾವು ನೋವು ಸಂಖ್ಯೆ ಪರಿಣಾಮಕಾರಿಯಾಗಿ ಕೆಳಕ್ಕಿಳಿದಿದೆ. ಪ್ಲೇಗಿನ ಪಿಡುಗು ವಿಸ್ತøತವಾಗಿ ಹರಡುವ ಸಾಧ್ಯತೆ ಇರುವುದರಿಂದ ರೋಗ ಗುರುತಿಸಲ್ಪಟ್ಟ ಪ್ರದೇಶದ 8ಕಿಮೀ ಸುತ್ತಳತೆಯಲ್ಲಿಯ ಜನರಿಗೆ ಈ ಲಸಿಕೆಯನ್ನು ಚುಚ್ಚಬೇಕು.

ಲಸಿಕೆಯನ್ನು ಚರ್ಮದಡಿ ಇಲ್ಲವೇ ಸ್ನಾಯುವಿನೊಳಕ್ಕೆ 7 ರಿಂದ 14 ದಿವಸಗಳ ಅವಧಿಯಲ್ಲಿ ಎರಡು ಬಾರಿ ಚುಚ್ಚಬೇಕು. ಗಂಡಸರಲ್ಲಿ ಮೊದಲ ಸಲ 1 ಮಿಲೀ ಅನಂತರ 1.5 ಮಿಲೀನಂತೆಯೂ ಹೆಂಗಸರಲ್ಲಿ ಮೊದಲ ಸಲ 0.75 ಮಿಲೀ ಅನಂತರ 1 ಮಿಲೀನಂತೆಯೂ ಈ ಲಸಿಕೆಯನ್ನು ಕೊಡಲಾಗುವುದು 1ರಿಂದ 4ವರ್ಷದ ಮಕ್ಕಳಿಗೆ 0.2 ಮಿಲೀ, 5ರಿಂದ 10ವರ್ಷದ ಮಕ್ಕಳಿಗೆ 0.3 ಮಿಲೀ ಮತ್ತು 11ರಿಂದ 16ವರ್ಷದ ಮಕ್ಕಳಿಗೆ 0.4 ಮಿಲೀ ಲಸಿಕೆಯನ್ನು ಮೊದಲ ಬಾರಿ ಕೊಟ್ಟು ಎರಡನೆಯ ಬಾರಿ ಅದರ ಇಮ್ಮಡಿ ಪ್ರಮಾಣದಲ್ಲಿ ಲಸಿಕೆಯನ್ನು ಕೊಡಬೇಕು. ಇದು ರೋಗವನ್ನು ತಡೆಗಟ್ಟುವಲ್ಲಿ ಉಪಯುಕ್ತ. ರೋಧಕತೆ 5ರಿಂದ 7ದಿವಸಗಳ ಅವಧಿಯಲ್ಲಿ ವೃದ್ಧಿಗೊಂಡು 6 ತಿಂಗಳ ಪರ್ಯಂತ ಉಳಿದಿರುತ್ತದೆ. ಲಸಿಕೆ ರೋಗ ತಡೆಯುವ ಬೆಳೆವಣಿಗೆ ಬಗ್ಗೆ ಅನುಮಾನವಿದ್ದರೂ ರೋಗ ಪಿಡುಗು ರೂಪ ತಳೆದಾಗ ಲಸಿಕೆಯನ್ನು 3 ಮಿಲೀ ಪ್ರಮಾಣದಲ್ಲಿ ಒಂದೇ ಬಾರಿಗೆ ಕೊಡುವುದಿದೆ.
(ವಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ